Wednesday, February 15, 2012

ಬದುಕಿ ಫಲವೇನು? - ಅನುಭವಗಳ ರಸಪಾಕ ಪೆರ್ಲ ಕೃಷ್ಣ ಭಟ್ಟರ ಸ್ವಾನುಭವ ಕಥನ


ಪುಸ್ತಕ ಪರಿಚಯ:

ಬದುಕಿ ಫಲವೇನು? (ಸ್ವಾನುಭವ ಕಥನ)
ಲೇಖಕರು : ಪೆರ್ಲ ಕೃಷ್ಣ ಭಟ್ಟ
ಪ್ರಕಾಶಕರು : ಸಾಹಿತ್ಯ ವೇದಿಕೆ, ಪೆರ್ಲ – ೬೭೧೫೫೨
ಪ್ರಥಮ ಮುದ್ರಣ : ೧೯೯೪
ಪುಟಗಳು : ೪ + ೩೨೬
ಬೆಲೆ : ರೂ. ೫೦

ಪೆರ್ಲ ಶ್ರೀ ಸತ್ಯನಾರಾಯಣ ಹೈಸ್ಕೂಲಿನಲ್ಲಿ ೩೧ ವರ್ಷ (೧೯೪೭ರಿಂದ ೧೯೭೮ರ ವರೆಗೆ) ಹಿಂದಿಪಂಡಿತರಾಗಿ ನಿವೃತ್ತರಾದ, ಯಕ್ಷಗಾನ ತಾಳಮದ್ದಳೆಯ ಪ್ರಸಿದ್ಧ ಅರ್ಥಧಾರಿ ಶ್ರೀ ಪೆರ್ಲ ಕೃಷ್ಣ ಭಟ್ಟರು (ಕೃ. ಭ. ಪೆರ್ಲ) ತಮ್ಮ ೭೦ ವರ್ಷಗಳ ಜೀವನದ ಬಳಿಕ ಬರೆದ ಪುಸ್ತಕವಿದು. ಇತ್ತೀಚೆಗೆ ನೆಂಟರೊಬ್ಬರ ಮನೆಯಲ್ಲಿ ಈ ಪುಸ್ತಕವನ್ನು ನೋಡಿದೆ. ಪೆರ್ಲ ಶಾಲೆಯಲ್ಲಿ ಅವರ ವಿದ್ಯಾರ್ಥಿಯಾಗಿದ್ದ ನಾನು ಆಸಕ್ತಿಯಿಂದ ಪುಸ್ತಕದ ಪುಟಗಳನ್ನು ತಿರುವಿ ಹಾಕಿದೆ; ಸಿಕ್ಕಿದ ಸ್ವಲ್ಪವೇ ಸಮಯದಲ್ಲಿ ಮೇಲಿಂದ ಮೇಲೆ ಅಲ್ಲಲ್ಲಿ ಅಷ್ಟಿಷ್ಟು ಓದಿಕೊಂಡೆ. ಮಾರುಕಟ್ಟೆಯಲ್ಲಿ ಈ ಪುಸ್ತಕ ಈಗ ಲಭ್ಯವಿದೆಯೇ ಎಂಬುದು ನನಗೆ ಗೊತ್ತಿಲ್ಲ . ಆಸಕ್ತಿ ಹಾಗೂ ಕುತೂಹಲದಿಂದ ಅವರೊಡನೆ “ಈ ಪುಸ್ತಕ ನಿಮಗೆಲ್ಲಿ ಸಿಕ್ಕಿತು, ನನಗೊಂದು ಪ್ರತಿ ತಂದುಕೊಡಬಹುದೇ” ಎಂದು ವಿಚಾರಿಸಿದೆ. ಕೂಡಲೇ ಅವರು, “ಇದು ನಿಮ್ಮಲ್ಲೇ ಇರಲಿ; ನೀವು ತೆಗೆದುಕೊಂಡು ಹೋಗಿ. ನನಗೆ ಓದಿ ಆಗಿದೆ” ಎಂದು ಪುಸ್ತಕವನ್ನು ನನ್ನ ಕೈಯಲ್ಲಿಟ್ಟರು.

ಸಾಮಾನ್ಯವಾಗಿ ವೃತ್ತಿನಿರತರ ಪೂರ್ವಾರ್ಧ ಜೀವನ ಅವಸರದಿಂದ ಕೂಡಿದ್ದು , ವೃತ್ತಿ, ಪ್ರವೃತ್ತಿ ಮತ್ತು ಸಾಂಸಾರಿಕ ಜೀವನದ ಜಂಜಡಗಳಿಂದಾಗಿ ಬಿಡುವಿಲ್ಲದ್ದಾಗಿರುತ್ತದೆ. ಮದುವೆ, ಮಕ್ಕಳು, ಮಕ್ಕಳ ವಿದ್ಯಾಭ್ಯಾಸ, ವಿವಾಹ ಎಲ್ಲವನ್ನೂ ಮುಗಿಸಿ, ಮಕ್ಕಳೂ ತಮ್ಮ ಜೀವನದಲ್ಲಿ ಭದ್ರವಾಗಿ ನೆಲೆಯೂರಿದ ಬಳಿಕ, ವೃತ್ತಿಯಿಂದಲೂ ನಿವೃತ್ತರಾಗಿ, ಎಲ್ಲಾ ಒತ್ತಡಗಳಿಂದ ಬಿಡುಗಡೆ ಹೊಂದಿ ಆರಾಮ ಜೀವನದಲ್ಲಿರುವಾಗ ಸಹಜವಾಗಿಯೇ ನೆನಪಿನ ಸುರುಳಿ ಬಿಚ್ಚ ತೊಡಗುತ್ತದೆ. ಇಷ್ಟರ ತನಕ ಮುನ್ನೋಟವೇ ಗುರಿಯಾಗಿದ್ದ ಜೀವನದ ಹಿನ್ನೋಟ ಈಗ ಆರಂಭವಾಗುತ್ತದೆ; ಮನಸ್ಸು ಮೆಲುಕಾಡ ತೊಡಗುತ್ತದೆ. ಹಿಂದಿ ಪಂಡಿತರು (ಹೈಸ್ಕೂಲು ತರಗತಿಗಳಲ್ಲಿ ಮಾತ್ರವಲ್ಲದೆ, ಅವರು ನಡೆಸುತ್ತಿದ್ದ ಹಿಂದಿ ಪ್ರಚಾರ ಸಭಾದ ಪ್ರಾಥಮಿಕ, ಮಾಧ್ಯಮಿಕ ಮತ್ತು ರಾಷ್ಟ್ರಭಾಷಾ ಕ್ಲಾಸುಗಳಲ್ಲಿಯೂ ವಿದ್ಯಾರ್ಥಿಯಾಗಿದ್ದ ನಾನು ಅವರನ್ನು ಹಾಗೆಯೇ ಗುರುತಿಸುತ್ತೇನೆ) ಈ ಸ್ಥಿತಿಗೆ ತಲುಪಿದ್ದು ಬಹುಶಃ ಅವರ ಪ್ರವೃತ್ತಿಯಾಗಿದ್ದ ತಾಳಮದ್ದಲೆಯ ಅರ್ಥಗಾರಿಕೆಯಿಂದಲೂ ನಿವೃತ್ತರಾದ ಮೇಲೆಯೇ ಇರಬೇಕು. ಈಗ ನಾನು ಕೂಡಾ ೬೫ ವರ್ಷಗಳನ್ನು ದಾಟಿದ ಹಿರಿಯ ನಾಗರಿಕನಾದ್ದರಿಂದ ಈ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಲ್ಲೆ. ಲೇಖಕರು ಆರಂಭದಲ್ಲಿಯೇ “ಇದು ಒಂದು ರೀತಿಯ ಸ್ವಗತ ಭಾಷಣ” ಎಂದಿದ್ದಾರೆ. ನಮ್ಮಂತಹ ಪ್ರಾಯಸ್ಥರಿಗೆ ಮಾತಿನ ಚಪಲ ಜಾಸ್ತಿ; ಅನೇಕರಿಗೆ ಹೇಳಿದ್ದನ್ನೇ ಪುನಃ ಪುನಃ ಹೇಳುವ ಅಭ್ಯಾಸವೂ ಇರುತ್ತದೆ. ಇದನ್ನರಿತ ಕಿರಿಯರು ಹಿರಿಯರ ಮಾತುಗಳನ್ನು ಕೇಳುವುದರಿಂದ ತಪ್ಪಿಸಿಕೊಳ್ಳುತ್ತಾರೆ. ಕೇಳುಗರಿಲ್ಲದಾಗ ಸ್ವಗತ ( soliloquy) ವೇ ಗತಿ! ಆದರೆ ಈ ಪುಸ್ತಕವು ಖಂಡಿತವಾಗಿಯೂ ಓದುಗರನ್ನು ಓದಿಸುವಂತಹ ಪುಸ್ತಕ; ಓಡಿಸುವಂತದ್ದಲ್ಲ.

ಲೇಖಕರು ಪುಸ್ತಕವನ್ನು ಸ್ವಾನುಭವ ಕಥನವೆಂದು ಹೇಳಿಕೊಂಡಿದ್ದರೂ, ಅದು ಆತ್ಮಕಥೆಯಲ್ಲದೆ ಬೇರೇನಲ್ಲ . ಆತ್ಮಕಥೆಯೆಂದರೂ ಸ್ವಾನುಭವ ಕಥನವೇ ಅಲ್ಲವೇ? ನಾನು, ನನ್ನದು, ನನ್ನಿಂದ ಇತ್ಯಾದಿ ಪದ ಪ್ರಯೋಗಗಳನ್ನು ಮಿತಿಮೀರಿ ಬಳಸುವುದಿಲ್ಲವೆಂದರೂ, ಇಂತಹ ಕಥನಗಳಲ್ಲಿ ಅವುಗಳಿಂದ ತಪ್ಪಿಸಿಕೊಳ್ಳುವುದು ಅಸಾಧ್ಯದ ಮಾತು. ಸ್ವಂತ ಅನುಭವಗಳನ್ನು ಹಾಗೆಯೇ ಹೇಳಿಕೊಳ್ಳಬೇಕೇ ವಿನಹ ಇತರರ ಅನುಭವಗಳೋ ಎಂಬಂತೆ ಹೇಳಿದರೆ ಸಹಜತೆ ಉಳಿದೀತೇ?

ಲೇಖಕರು ಇಡೀ ಪುಸ್ತಕವನ್ನು ಅನುಭವಗಳ ನೆಲೆಯಲ್ಲಿ ಎಂಟು ಅಧ್ಯಾಯಗಳಾಗಿ ವಿಂಗಡಿಸಿದ್ದಾರೆ. ಮೊದಲ ನಾಲ್ಕು ಅಧ್ಯಾಯಗಳಲ್ಲಿ ಅವರು ವಿದ್ಯಾರ್ಥಿಯಾಗಿ , ಅಧ್ಯಾಪಕನಾಗಿ , ಲೇಖಕ-ಭಾಷಣಕಾರನಾಗಿ , ಮತ್ತು ಯಕ್ಷಗಾನದ ಅರ್ಥಧಾರಿಯಾಗಿ ಪಡೆದ ವಿವಿಧ ರೀತಿಯ ಅನುಭವಗಳನ್ನು ಘಟನಾವಳಿಗಳ ಮೂಲಕ ರಸವತ್ತಾಗಿ ವರ್ಣಿಸಿದ್ದಾರೆ. ಮುಂದಿನ ಮೂರು ಅಧ್ಯಾಯಗಳಲ್ಲಿ ಸಹೋದ್ಯೋಗಿಗಳು , ಸಹ ಕಲಾವಿದರು, ಮತ್ತು ಬಂಧುಗಳು-ಹಿತೈಷಿಗಳೊಂದಿಗಿನ ಅನುಭವಗಳ ಕಥನವಿದೆ. ಕೊನೆಯ ಅಧ್ಯಾಯವನ್ನು ಆತ್ಮಾವಲೋಕನಕ್ಕೆ ಬಳಸಿಕೊಂಡಿದ್ದಾರೆ.

ಶುದ್ಧ ಸಂಪ್ರದಾಯಸ್ಥ ಸಂಸ್ಕಾರವಂತ ಕರಾಡ ಬ್ರಾಹ್ಮಣ ಪುರೋಹಿತರ ಕುಟುಂಬದಲ್ಲಿ ಜನಿಸಿ, ಅದೇ ಸಂಪ್ರದಾಯದಲ್ಲಿ ಬೆಳೆದು ಸಂಸ್ಕೃತ , ವೇದಗಳು , ಹಿಂದಿ , ಕನ್ನಡ , ಪುರಾಣ ಇತ್ಯಾದಿಗಳಲ್ಲಿ ಪ್ರಸಿದ್ಧ ಪಂಡಿತರಾಗಿ , ಧಾರ್ಮಿಕ , ಪೌರಾಣಿಕ ಪ್ರವಚನಗಳನ್ನು ಕೂಡಾ ಮಾಡುತ್ತಿದ್ದ ಲೇಖಕರಿಗೆ ಜೀವನದ ಏಳುಬೀಳುಗಳ ದೀರ್ಘ ವಿಸ್ತೃತ ಅನುಭವಗಳ ಹಿನ್ನೆಲೆಯ ಚಿಂತನೆಯಲ್ಲಿ ದ್ವಂದ್ವಗಳು ಕಾಡುತ್ತವೆ. “ನೂರಾರು ಮತೀಯ ತತ್ವಸಿದ್ಧಾಂತಗಳು , ನಂಬಿಕೆಗಳು , ಪರಂಪರೆಯ ಆಚಾರಗಳು ,ಒಂದೊಂದೂ ಒಂದೊಂದು ರೀತಿಯಲ್ಲಿ ಅಸಂಬದ್ಧವೆಂದು ತೋರುವುದರಿಂದ ಮನುಷ್ಯನ ಬಾಳ್ವೆ ಎಂದರೆ ಏನೆಂದು ಅರ್ಥವೇ ಆಗುವುದಿಲ್ಲ” ಎನ್ನುತ್ತಾರೆ. “ಹುಟ್ಟಿನ ಈಚೆಗೆ , ಸಾವಿನ ಆಚೆಗೆ ಏನಿತ್ತು , ಏನಿದೆ ಎಂದು ತಿಳಿಯದಿದ್ದುದರಿಂದ ಹಿಂದೆಯೂ ಶೂನ್ಯ , ಮುಂದೆಯೂ ಶೂನ್ಯ ಎಂದಿಷ್ಟು ಮಾತ್ರ ನಾವು ತಿಳಿಯ ಬಹುದಷ್ಟೆ” ಎಂಬ ನಿರ್ಧಾರಕ್ಕೆ ಬರುತ್ತಾರೆ. ತಾತ್ವಿಕ ಸಂದೇಹಗಳಿದ್ದರೂ, ಪರಂಪರಾಗತ ವಿಷಯಗಳ ಒಳ್ಳೆಯ ಅಂಶಗಳನ್ನು ನಂಬುತ್ತಾರೆ. ಆದ್ದರಿಂದಲೇ ಪ್ರವಚನಗಳನ್ನು ಮಾಡುತ್ತಿದ್ದುದಕ್ಕೆ ಅಪರಾಧಿ ಮನೋವೃತ್ತಿಯಿಲ್ಲ ಎನ್ನುತ್ತಾರೆ.

ಕೌಟುಂಬಿಕ ಹಿನ್ನೆಲೆಯನ್ನು ವಿವರಿಸುತ್ತಾ ಕರಾಡ ಬ್ರಾಹ್ಮಣರ ಬಗ್ಗೆ , ಅವರ ಗುಣ ಸ್ವಭಾವಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. ಕಾಸರಗೋಡು ತಾಲೂಕಿನ ಪಡ್ರೆ ಗ್ರಾಮದ ಮೈಕಾನ ಎಂಬಲ್ಲಿ ವಾಸವಿದ್ದ ಗುರು ಶ್ರೀಪತಿ ಶಾಸ್ತ್ರಿ-ನೇತ್ರಾವತಿ ದೇವಿಯವರ ಮಗನಾಗಿ ಕೃಷ್ಣ ಭಟ್ಟರು ಜನಿಸಿದರು. ತಾಳಮದ್ದಳೆಯ ಶ್ರೇಷ್ಠ ಅರ್ಥಧಾರಿಗಳೂ ಆಗಿದ್ದ ಗುರು ಶ್ರೀಪತಿ ಶಾಸ್ತ್ರಿಗಳು ಸ್ವರ್ಗ ಎಂಬಲ್ಲಿದ್ದ ಸಂಸ್ಕೃತ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯರೂ ಆಗಿದ್ದರು. ವಿದ್ವಾಂಸರಾಗಿದ್ದರೂ ಕಡು ಬಡವರಾಗಿದ್ದ ಗುರು ಶ್ರೀಪತಿ ಶಾಸ್ತ್ರಿಗಳು “ಸ್ವಲ್ಪವೂ ಲೋಭವಿಲ್ಲದೆ ಹಿಂದು ಮುಂದು ನೋಡದೆ ತನ್ನ ಕೈಯಲ್ಲಿದ್ದುದನ್ನು ಕಷ್ಟದಲ್ಲಿರುವ ಇತರರಿಗೆ ಕೊಟ್ಟು ಕೈ ತೊಳೆಯುವ ಸ್ವಭಾವ”ದವರಾಗಿದ್ದರು.

೬ನೇ ತರಗತಿಯ ತನಕ ಪೆರ್ಲ ಶಾಲೆಯಲ್ಲಿ ಕಲಿತ ಕೃಷ್ಣ ಭಟ್ಟರು ೧೯೩೭ರಿಂದ ೧೯೩೯ರ ತನಕ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಆ ಕಾಲೇಜಿನಲ್ಲಿ ಅಧ್ಯಾಪಕರೂ ದೂರದ ಸಂಬಂಧಿಗಳೂ ಆಗಿದ್ದ ಚಾಂಗುಳಿ ಸುಬ್ರಾಯ ಶಾಸ್ತ್ರಿಗಳ ಮನೆಯಲ್ಲಿದ್ದು ಪ್ರತಿದಿನವೂ ನಾಲ್ಕೈದು ಮೈಲು ದೂರದಲ್ಲಿದ್ದ ಕಾಲೇಜಿಗೆ ಹೋಗುತ್ತಿದ್ದರು. ಈ ಕಾಲೇಜಿನಲ್ಲಿದ್ದ ಎರಡು ವರ್ಷಗಳಲ್ಲಿ೧೦-೧೫ ನಾಟಕಗಳಲ್ಲಿ ಪಾತ್ರ ವಹಿಸಿದ್ದರಂತೆ. ಅಭಿಜ್ಞಾನ ಶಾಕುಂತಲದ ಶಕುಂತಲೆಯ ಪಾತ್ರ ವಹಿಸಿದ್ದಕ್ಕೆ ಆ ಕಾಲದಲ್ಲಿ ಎರಡೂವರೆ ರೂಪಾಯಿ ಬೆಲೆಯಿದ್ದ ’ಬ್ಲೇಕ್ ಬರ್ಡ್’ ಎಂಬ ಪ್ರಸಿದ್ಧ ಹೆಸರಿನ ಪೆನ್ನನ್ನು ಪಡೆದುದು ಊರಿನಲ್ಲಿ ವಿಶೇಷ ಸುದ್ದಿಯಾಗಿತ್ತಂತೆ.

೧೯೩೯ರಲ್ಲಿ ಬೆಂಗಳೂರಿಗೆ ಪ್ರಯಾಣ; ಅಲ್ಲಿಯ ಚಾಮರಾಜೇಂದ್ರ ಸಂಸ್ಕೃತ ಕಾಲೇಜಿನಲ್ಲಿ ವಿದ್ಯಾಭ್ಯಾಸದ ಮುಂದುವರಿಕೆ. ವಾರಾನ್ನ, ಭಿಕ್ಷಾನ್ನಗಳಿಂದ ಜೀವನ. ವಾರಾನ್ನ, ಭಿಕ್ಷಾನ್ನಗಳ ಅನುಭವವನ್ನು ಸ್ವಾರಸ್ಯಕರ ಘಟನೆಗಳೊಂದಿಗೆ ವಿವರಿಸುತ್ತಾರೆ. ಐಯ್ಯರ್ ಒಬ್ಬರ ಮನೆಯಲ್ಲಿ ಮಲೆಯಾಳಿ ನಾಯರ್ ಒಬ್ಬ “ಬ್ರಾಹ್ಮಣ” ನಾಗಿ ಅಡಿಗೆ ಮಾಡುತ್ತಿದ್ದುದು ಶುಕ್ರವಾರದ ಊಟಕ್ಕೆ ಆ ಮನೆಗೆ ಹೋಗುತ್ತಿದ್ದ ಕೃಷ್ಣ ಭಟ್ಟರಿಗೆ ಹೇಗೋ ತಿಳಿಯಿತು. ಈ ರಹಸ್ಯ ಬಯಲಾಗದಂತೆ ಇವರನ್ನು ಒಲಿಸಿಕೊಳ್ಳಲು ಆ ಅಡಿಗೆ “ಭಟ್ಟ” ಇವರಿಗೆ ಧಾರಾಳವಾಗಿ ಹಾಲು, ಮೊಸರು, ಬೆಣ್ಣೆ, ತುಪ್ಪ ಬಡಿಸುತ್ತಿದ್ದ. “ನಾಯರ್ ಮುಟ್ಟಿದ ಅನ್ನ ತಿಂದದ್ದರಿಂದ ನನ್ನ ಬ್ರಾಹ್ಮಣ್ಯಕ್ಕೇನೂ ಧಕ್ಕೆ ಉಂಟಾಗಲಿಲ್ಲ” ಎನ್ನುತ್ತಾರೆ ಭಟ್ಟರು! ಇಂತಹ ಹಲವಾರು ರಸವತ್ತಾದ ಘಟನೆಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಏಳು ವರ್ಷಗಳ ಕಾಲ ಬೆಂಗಳೂರಿನ ಸಂಸ್ಕೃತ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಯಿತು. ಆ ಸಮಯದಲ್ಲಿ ನಾಟಕ, ಭಾಷಣ ,ಚರ್ಚಾಕೂಟ ಇತ್ಯಾದಿಗಳಲ್ಲಿ ಭಾಗವಹಿಸುತ್ತಿದ್ದರು. ಪತ್ರಿಕೆಗಳಿಗೆ ಲೇಖನ ಬರೆಯುವ ಹವ್ಯಾಸವೂ ಆರಂಭವಾಯಿತು. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ೮-೧೦ ದಿನಗಳ ಜೈಲು ವಾಸದ ಅನುಭವವನ್ನೂ ಗಳಿಸಿದರು. ಆದರೆ ಶಿಕ್ಷೆಯಾಗದ್ದರಿಂದ ಜೈಲುವಾಸದ ದಾಖಲೆಯಿಲ್ಲ. ಹಾಗಾಗಿ “ಸ್ವಾತಂತ್ರ್ಯಯೋಧರಿಗೆ ಸರಕಾರ ಒದಗಿಸಿದ ವಿವಿಧ ಸವಲತ್ತುಗಳಿಗೆ ಕೈಯೊಡ್ಡುವ ಆಮಿಷ” ಅವರ ಪಾಲಿಗೆ ಬಂದಿಲ್ಲ!

ಬೆಂಗಳೂರಿನಲ್ಲಿದ್ದ ಹದಿಹರೆಯದ ಭಟ್ಟರಿಗೆ ಪ್ರಸಿದ್ಧ ಹಿಂದಿ ಸಿನೆಮಾ ನಟನಾಗಬೇಕೆಂಬ ಹುಚ್ಚು ಕಲ್ಪನೆ ಕಾಡತೊಡಗುತ್ತದೆ. ಮುಂದೆ “ಯಾವ ಪ್ರಯೋಜನಕ್ಕೂ ಬಾರದ ಸಂಸ್ಕೃತ ವಿದ್ಯಾಭ್ಯಾಸವು ವ್ಯರ್ಥ”ವೆಂದು ತೀರ್ಮಾನಿಸಿ ಒಂದು ದಿನ ಯಾರಿಗೂ ತಿಳಿಸದೆ ಕೊಲ್ಲಾಪುರಕ್ಕೆ ಹೋಗಿ “ಪ್ರಸಿದ್ಧ ಸಿನೆಮಾನಟ”ನಾಗುತ್ತಾರೆ. ಆದರೆ ಒಂದೇ ವಾರದಲ್ಲಿ ಜ್ಞಾನೋದಯವಾಗಿ ಕಾಲೇಜಿಗೆ ಹಿಂದಿರುಗುತ್ತಾರೆ. ತಿರುಪತಿ ಯಾತ್ರೆಗಳು, “ತಿರುಪತಿ ಕ್ಷೌರ”, “ಶ್ರೀಗಂಧ ಕ್ಷೌರ”, “ಪಿತೃಶ್ರಾದ್ಧದ ಉಪವಾಸ”ಗಳು ಓದುಗರನ್ನು ನಗಿಸದೆ ಬಿಡಲಾರವು. ತಿರುಪತಿಯಲ್ಲಿ ಶೇಣಿ, ದೇರಜೆ ಮತ್ತು ಪೆರ್ಲರು ರೂಪಾಯಿಗೊಂದರಂತೆ ಖರೀದಿಸಿದ ಶ್ರೀಗಂಧದ ತುಂಡುಗಳು ದೇವದಾರ ಮರದ್ದು! ತೀರ್ಥ ಅಮಾವಾಸ್ಯೆಯ ಹಿಂದಿನ ದಿನ ಕುಬಣೂರು ಬಾಲಕೃಷ್ಣ ರಾಯರ ನೇತೃತ್ವದಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟ, ದೇರಜೆ ಸೀತಾರಾಮಯ್ಯ ಮತ್ತು ಪೆರ್ಲ ಕೃಷ್ಣ ಭಟ್ಟರು ರಾಮೇಶ್ವರ ತಲುಪುತ್ತಾರೆ. ಬಾಲಕೃಷ್ಣ ರಾಯರು ಮರುದಿನ ನಾಲ್ಕು ಜನರೂ (ನಾಲ್ಕೂ ಜನ ಬ್ರಾಹ್ಮಣರೆ) ಪಿತೃಶ್ರಾದ್ಧ ಮಾಡಬೇಕೆಂದೂ, ಅದಕ್ಕಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಿಸಿದ್ದೇನೆಂದೂ, ಬೆಳಗ್ಗಿನಿಂದ ನೀರನ್ನು ಸಹ ಕುಡಿಯದೆ ಉಪವಾಸವಿದ್ದು ಶ್ರಾದ್ಧ ಮಾಡಬೇಕೆಂದೂ ಆಜ್ಞೆ ಮಾಡುತ್ತಾರೆ. ಆದರೆ ಕೃಷ್ಣ ಭಟ್ಟರು ರಾತ್ರಿಯೇ ಹತ್ತಿರದ ಹೋಟೆಲೊಂದನ್ನು ಹುಡುಕಿಟ್ಟಿದ್ದರು. ಬೆಳಗ್ಗಿನ ಚಾ ಇಲ್ಲದೆ ಅವರು ಏನೂ ಮಾಡುವಂತಿರಲಿಲ್ಲ. ಮರುದಿನ ನಸುಕಿನಲ್ಲೇ ಎದ್ದ ಭಟ್ಟರು ಸದ್ದಿಲ್ಲದೆ ಹೋಟೆಲಿನತ್ತ ಹೋಗುವಾಗ ಎದುರು ಕಡೆಯಿಂದ ಅಷ್ಟರಲ್ಲೇ ಚಾ ಕುಡಿದು ಹಿಂದಿರುಗುತ್ತಿದ್ದ ಸೀತಾರಾಮಯ್ಯನವರು ಸಿಗಬೇಕೇ ! ಅವರು “ಪಂಡಿತರೇ, ನಾನು ವಕೀಲರ ಆಜ್ಞೆಯನ್ನು ಉಲ್ಲಂಘಿಸಿ ಬಿಟ್ಟೆ; ಚಾ ತಯಾರಾಗಿದೆ, ಬೇಗ ಹೋಗಿ ಬನ್ನಿ” ಎನ್ನುತ್ತಾರೆ. ಬಿಡಾರದ ಹತ್ತಿರ ಬಂದಾಗ ಇನ್ನೊಂದು ವ್ಯಕ್ತಿ ತಲೆಯ ಮೇಲೆ ಶಾಲು ಹೊದ್ದುಕೊಂಡು ಹೊರಟದ್ದು ಕಾಣಿಸುತ್ತದೆ. ಶೇಣಿಯವರು “ನಾನೂ ಬೇಗ ಹೋಗಿ ಬಂದು ಬಿಡುತ್ತೇನೆ.” ಎಂದು ಹೋಗುತ್ತಾರೆ. ಏನೂ ಅರಿಯದ ಮುಗ್ಧ ಬಾಲಕೃಷ್ಣ ರಾಯರೊಂದಿಗೆ ಈ ಮೂವರು “ನಿಷ್ಠಾವಂತ” ಬ್ರಾಹ್ಮಣರು ಕೂಡಾ ಪಿತೃಶ್ರಾದ್ಧವನ್ನು ಮಾಡುತ್ತಾರೆ !

ಅಧ್ಯಾಪಕನಾಗಿ ಅನುಭವಿಸಿದ ಹಲವಾರು ಘಟನೆಗಳನ್ನು ದಾಖಲಿಸಿದ್ದಾರೆ. ವಾರ್ಷಿಕ ಇನ್ಸ್ಪೆಕ್ಷನ್ನ ನಾಟಕ, ವಿದ್ಯಾಧಿಕಾರಿಗಳ ಮುಂದೆ ಅಪರಾಧಿಯ ಸ್ಥಾನದಲ್ಲಿ ನಿಂತದ್ದು , ಮೌಲ್ಯ ಮಾಪಕನಾಗಿ ಉತ್ತರಪತ್ರಿಕೆಗಳ ಕಟ್ಟನ್ನು ಪ್ರಧಾನ ಪರೀಕ್ಷಕರಿಗೆ ಕೊಡಲಿಕ್ಕಾಗಿ ಚಿರ್ಪಲ್ಶೇರಿ ಎಂಬ ಸಣ್ಣ ಊರಿನ ಹಿಂದಿ ಪಂಡಿತ ನಾಯರ್ ಎಂಬವರ ಮನೆಗೆ ರಾತ್ರಿ ಪರಿಚಯವಿಲ್ಲದ ಊರಲ್ಲಿ ಪರಿಚಯವಿಲ್ಲದ ವ್ಯಕ್ತಿಯೊಂದಿಗೆ ಹೋಗಿ ನಾಯರ್ ಮನೆಯಲ್ಲೇ ಊಟ ಮಾಡಿ ಮರುದಿನ ಹಿಂದಿರುಗಿದ್ದು , ವಿದ್ಯಾರ್ಥಿಯಾಗಿ ಹೋಗಿ ಅಧ್ಯಾಪಕನಾದದ್ದು , ವಿದ್ಯಾರ್ಥಿಯೊಬ್ಬನ ಪ್ರೇಮ ಪತ್ರ ಪ್ರಕರಣವನ್ನು ರಹಸ್ಯವಾಗಿ ಇತ್ಯರ್ಥ ಮಾಡಿದ್ದು ಇತ್ಯಾದಿ ಗಮನ ಸೆಳೆಯುತ್ತವೆ. ಮಗಳ ಮದುವೆಯನ್ನು ಸರಳವಾಗಿ ಶೃಂಗೇರಿ ಜಗದ್ಗುರುಗಳ ಸನ್ನಿಧಿಯಲ್ಲಿ ನಡೆಸಿದ್ದು ಕೂಡಾ ಉಲ್ಲೇಖನೀಯ.

ಭಾಷಣಕಾರನಾಗಿ ಎಲ್ಲ ಪ್ರಕಾರಗಳ ಭಾಷಣಗಳನ್ನು ಮಾಡಿದ ಅನುಭವ. ಭಾಷಣಾಭ್ಯಾಸಿಗಳ ಉಪಯೋಗಕ್ಕಾಗಿ ಅಧ್ಯಕ್ಷ ಭಾಷಣ, ಪ್ರಧಾನ ಭಾಷಣ, ಅತಿಥಿಗಳ ಭಾಷಣ, ಅಭಿನಂದನ ಭಾಷಣ, ಸಂತಾಪ ಸೂಚಕ ಭಾಷಣ, ಸ್ವಾಗತ ಭಾಷಣ, ಧನ್ಯವಾದ ಭಾಷಣ, ಹಿತಚಿಂತಕರ ಭಾಷಣ, ಸಭಿಕರ ಭಾಷಣ, ಚುನಾವಣೆಯ ಭಾಷಣ, ಇತ್ಯಾದಿ ಭಾಷಣಗಳು ಹೇಗಿರಬೇಕೆಂಬುದನ್ನು ವಿವರಿಸುತ್ತಾರೆ.

ಯಕ್ಷಗಾನದ ಅರ್ಥಧಾರಿಯಾಗಿ ದೀರ್ಘ ಕಾಲದ ಅಪಾರ ಅನುಭವವಿರುವ ಲೇಖಕರ ನೆನಪಿನ ಬುತ್ತಿಯಲ್ಲಿ ಅಸಂಖ್ಯ ಘಟನೆಗಳಿರಬಹುದು. ಹಲವು ಸಿಹಿ ಕಹಿ ಘಟನೆಗಳನ್ನೂ , ರಸ ನಿಮಿಷಗಳನ್ನೂ ಇಲ್ಲಿ ದಾಖಲಿಸಿದ್ದಾರೆ. ಇವುಗಳನ್ನು ಓದುಗರೇ ಓದಿ ರಸಾಸ್ವಾದನೆ ಮಾಡುವುದೊಳಿತು.

ಪೆರ್ಲ ಕೃಷ್ಣ ಭಟ್ಟರ ಸಹೋದ್ಯೋಗಿಗಳು, ವಿದ್ಯಾರ್ಥಿಗಳು, ಸಹಕಲಾವಿದರು, ಬಂಧುಬಳಗದವರು, ಹಿತಚಿಂತಕರು ಮುಂತಾದವರೆಲ್ಲ ಓದಲೇಬೇಕಾದ ಪುಸ್ತಕ. ಅವರ ಬಗ್ಗೆ ಎಷ್ಟೇ ಗೊತ್ತಿದ್ದರೂ, ಗೊತ್ತಿಲ್ಲದ ಅನೇಕ ವಿಷಯಗಳು ಪುಸ್ತಕದಲ್ಲಿರಬಹುದು. ಅವರು ಪ್ರಾಮಾಣಿಕವಾಗಿ ನೇರ ಮಾತುಗಳಲ್ಲಿ , ಸಂಕೋಚ ಮುಜುಗರಗಳಿಲ್ಲದೆ , ಬರೆದಂತಹ ಅನುಭವದ ಮಾತುಗಳು ಮನನಾರ್ಹ.

*************

Thursday, February 9, 2012

ಸ್ವಪ್ನ ಸಾರಸ್ವತ - ಅದ್ಭುತ ಕಥನ


ಸ್ವಪ್ನ ಸಾರಸ್ವತ (ಕಾದಂಬರಿ): ಕೇಂದ್ರ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಗಳಿಂದ ಪುರಸ್ಕೃತ ಕೃತಿ

ಲೇಖಕರು: ಶ್ರೀ ಗೋಪಾಲಕೃಷ್ಣ ಪೈ
ಪ್ರಕಾಶಕರು: ಭಾಗ್ಯಲಕ್ಷ್ಮೀ ಪ್ರಕಾಶನ, ಬೆಂಗಳೂರು
ಬೆಲೆ: ರೂ; ೩೨೫

"ಸ್ವಪ್ನ ಸಾರಸ್ವತ’’ವನ್ನು ಓದಿ ಇದನ್ನು ಬರೆಯುತ್ತಿದ್ದೇನೆ. ಮೊದಲನೆಯದಾಗಿ ಈ ಅದ್ಭುತ ಸಾಧನೆಗಾಗಿ ಲೇಖಕ ಶ್ರೀ ಗೋಪಾಲಕೃಷ್ಣ ಪೈಯವರಿಗೆ ಅಭಿನಂದನೆಗಳು! ೪೭೦ ಪುಟಗಳಷ್ಟು ದೀರ್ಘವಾದ ಕಾದಂಬರಿಯನ್ನು ನಿಧಾನವಾಗಿ ಆಸ್ವಾದಿಸುತ್ತಾ ಓದಲು ಮೂರು ವಾರ ತೆಗೆದುಕೊಂಡೆ.
ಈ ಕಾದಂಬರಿಗಾಗಿ ಪೈ ಅವರು ಹಲವಾರು ವರ್ಷಗಳ ಕಾಲ ಸಂಶೋಧನಾ ಕಾರ್ಯ ಮಾಡಿದ್ದು ಅಚ್ಚರಿಯಲ್ಲ! ಅದಿಲ್ಲದೆ ಇಂತಹ ಇತಿಹಾಸವನ್ನು ಆಧಾರವಾಗಿಟ್ಟುಕೊಂಡು ಸೃಜನಾತ್ಮಕ ಕಾದಂಬರಿಯನ್ನು ಸೃಷ್ಟಿಸಲು ಅಸಾಧ್ಯ. ಕಥನ ತಂತ್ರ (ಅಜ್ಜ ಮೊಮ್ಮಗನಿಗೆ ವಂಶದ ಕತೆ ಹೇಳುವುದು) ಉತ್ತಮವಾಗಿದೆ. ಈ ಕಾದಂಬರಿಯನ್ನು ಓದುವಾಗ ಓದುಗರಿಗೆ ಭೈರಪ್ಪನವರ ನೆನಪಾಗಿಯೇ ಆಗುತ್ತದೆ. ಆವರಣದಲ್ಲಿ ಇಂತಹದೇ ಇನ್ನೊಂದು ತಂತ್ರವನ್ನು ಬಳಸಿದ್ದಾರೆ. ಬೈರಪ್ಪನವರು ಆಧಾರ ಗ್ರಂಥಗಳನ್ನೂ ಹೆಸರಿಸಿದ್ದಾರೆ. ಇಲ್ಲಿ ಅದರ ಅಗತ್ಯವಿಲ್ಲ. ಪ್ರಥಮ ಕಾದಂಬರಿಗೇ ಬುಕರ್ ಪ್ರಶಸ್ತಿ ಗಳಿಸಿದ ಅರವಿಂದ ಅಡಿಗರ White Tigerನಲ್ಲಿ ಭಾರತಕ್ಕೆ ಭೇಟಿ ಕೊಡಲಿರುವ ಚೀನಾದ ಪ್ರಧಾನಿಗೆ ಭಾರತದ ಸ್ಥಿತಿಗತಿಗಳ ಬಗ್ಗೆ ಪತ್ರ ಬರೆಯುವ ಮೂಲಕ ಕತೆ ಹೇಳಿಸುವುದೇ ತಂತ್ರ. (ಈ ಕಾದಂಬರಿಗೆ ಹೇಗೆ ಮತ್ತು ಏಕೆ ಪ್ರಶಸ್ತಿ ಬಂತೆಂದು ಗೊತ್ತಿಲ್ಲ.)
ಐತಿಹಾಸಿಕ ವಿಷಯವನ್ನು ಎತ್ತಿಕ್ಕೊಂಡು ಆ ಕಾಲಕ್ಕೊಪ್ಪುವ ಅಥವಾ ಆ ಕಾಲದ ಸಾಮಾಜಿಕ ಘಟನೆಗಳಿಗೆ ಅಥವಾ ಪರಿಸ್ಥಿಗೆ ಹೊಂದುವಂತೆ ಒಂದು ಸೃಜನಾತ್ಮಕ ಕಾದಂಬರಿ ರಚಿಸುವುದು ಸುಲಭದ ಮಾತಲ್ಲ! ಇದು ಹಿಂದಿನ ಐತಿಹಾಸಿಕ ಕಾದಂಬರಿಗಳ (ಉದಾ: ಗಳಗನಾಥರ ಕಾದಂಬರಿಗಳು) ಸಾಲಿಗೆ ಸೇರುವಂತದ್ದಲ್ಲ. ಪಿ.ವಿ.ನರಸಿಂಹ ರಾಯರ ಆತ್ಮಕತೆಯೆಂದೇ ಬಿಂಬಿಸಲ್ಪಟ್ಟ Insider ಕೂಡಾ ಈ ರೀತಿಯ ಪ್ರಯತ್ನ. ಅದು ಕಾಂಗ್ರೆಸ್ ಪಕ್ಷದ ರಾಜಕೀಯ ಇತಿಹಾಸದ ಕಾದಂಬರಿಯೆಂದೇ ಹೇಳಬಹುದು. ಅದರ ಕಥಾನಾಯಕನನ್ನು ನರಸಿಂಹ ರಾಯರೆಂದೇ ಗುರುತಿಸುತ್ತಾರೆ.
ಪೈ ಅವರ ಕಥನ ರೀತಿ ಮತ್ತು ಶೈಲಿ ಆಸಕ್ತಿ ಹುಟ್ಟಿಸುವಂತದ್ದು; ವ್ಯಕ್ತಿ ಚಿತ್ರಣ ವ್ಯಕ್ತಿಗಳನ್ನು ನಮ್ಮೆದುರೇ ತಂದು ನಿಲ್ಲಿಸುತ್ತದೆ. ಕಥಾ ವಸ್ತು (ಒಂದು ಸಮಾಜ - ಸಾರಸ್ವತ - ದ ವಲಸೆ) ವಿನೂತನ ಮತ್ತು ಕುತೂಹಲದಾಯಕ. ಉತ್ತರದಿಂದ ದಕ್ಷಿಣಕ್ಕೆ ನದಿಯ ಪ್ರವಾಹದಂತೆ ಸಾಗುವ ಕತೆಯಲ್ಲಿ ಬರುವ ವ್ಯಕ್ತಿಗಳ ಸಂಖ್ಯೆ ಬಹು ದೊಡ್ಡದು. ಮೂರ್ನಾಲ್ಕು ತಲೆಮಾರುಗಳ ವ್ಯಕ್ತಿಗಳನ್ನೂ, ಅವರೊಳಗಿನ ಸಂಬಂಧಗಳನ್ನೂ ನೆನಪಿಟ್ಟುಕೊಂಡು ಮುಂದುವರಿಯುವುದು ಓದುಗನಿಗೆ ಸುಲಭವಲ್ಲ! ಕತೆಗಾರನಿಗೆಂತೋ!! ಈ ಪ್ರವಾಹದ ಕವಲುಗಳು ಅನೇಕ ಇರಬಹುದು. ಒಂದು ಕವಲು ಬಳ್ಳಂಬೆಟ್ಟಿಗೆ ಸಾಗುತ್ತದೆ.
ಬಳ್ಳಂಬೆಟ್ಟು ಕುಟುಂಬದವರೇ ಆದ ಗೋಪಾಲಕೃಷ್ಣ ಪೈ ಆ ಕವಲನ್ನೇ ಆಯ್ದುಕೊಂಡುದು ಸಹಜವೆ. (ನಿಜವಾದ ಬಳ್ಳಂಬೆಟ್ಟು ಜೀವನದ ವಾಸ್ತವ ಚಿತ್ರಣ ಮಂಗಳೂರು ಆಕಾಶವಾಣಿಯಲ್ಲಿರುವ ಶಶಿಕಲಾ ಅವರು ಧಾರಾವಾಹಿಯಾಗಿ ಅಂತರ್ಜಾಲ ಪತ್ರಿಕೆ ಕೆಂಡಸಂಪಿಗೆಯಲ್ಲಿ ಪ್ರಕಟಿಸುತ್ತಿರುವ "ಬಳ್ಳಂಬೆಟ್ಟಿನ ನನ್ನ ಬಾಲ್ಯ ಜೀವನ"ದಲ್ಲಿ ನೋಡಬಹುದು.) ಪರಿಚಿತ ಪರಿಸರ, ಪರಿಚಿತ ಜನಜೀವನ ಇತ್ಯಾದಿಗಳಿಂದಾಗಿಯೇ ಇರಬಹುದು -- ಇಲ್ಲಿ ಕತೆಯ ಘಟನಾವಳಿಗಳು ಮೇಲಿಂದ ಮೇಲೆ ಘಟಿಸುತ್ತವೆ; ಕತೆಯ ವೇಗ, ವ್ಯಕ್ತಿಗಳ ಆವೇಶ, ಓದುಗರ ಭಾವನೆಗಳ ತೀವ್ರತೆ ಎಲ್ಲವೂ ಏರುತ್ತವೆ; ಓದುಗರ ಮನ ಕಲಕುತ್ತವೆ. ಇಲ್ಲಿಯ ಒಬ್ಬೊಬ್ಬ ವ್ಯಕ್ತಿಯ ವ್ಯಕ್ತಿತ್ವವೂ ಬೇರೆ ಬೇರೆ. ರಾಮಚಂದ್ರ ಪೈ, ತಿಮ್ಮಪೈ, ಶಿವಪ್ಪಯ್ಯ, ದೇವುಪೈ, ಕಾವೇರಮ್ಮ, ಅನಂತ ಪೈ, ಭುಜಂಗ ಪೈ, ಪೆದ್ದು ರಂಗ ಪೈ ಮುಂತಾದ ವ್ಯಕ್ತಿಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಶ್ರಾದ್ಧದ ದಿನ ಬಳ್ಳಂಬೆಟ್ಟು ಮನೆಯಲ್ಲಿ ನಡೆದ ಜಗಳ ಓದುಗನ ಕಣ್ಣೆದುರೇ ನಡೆಯುತ್ತದೆ; ಅಲ್ಲಿಯ ವ್ಯಕ್ತಿಗಳು ನಿಂತ ಸ್ಥಳ, ಭಂಗಿ, ಮುಖಭಾವ, ಎಲ್ಲವೂ ಸ್ಪಷ್ಟವಾಗಿ ಕಾಣುತ್ತದೆ. ಅಂತು ಪೈ, ಭುಜಂಗ ಪೈ, ಕಾವೇರಮ್ಮ ಮತ್ತು ರಾಚ್ಚು ಪೈಗಳಂತಹ ಭಾವ ತೀವ್ರತೆಯ ವ್ಯಕ್ತಿಗಳು ಓದುಗನ ಮನಸ್ಸಿನಿಂದ ಬೇಗನೆ ಮರೆಯಾಗಲಾರವು.
ಕಾದಂಬರಿಯನ್ನು ಕೊನೆಗೊಳಿಸುವ ಸಲುವಾಗಿಯೇ ಇರಬಹುದು- ಕೊನೆಯ ಕೆಲವೆ ಪುಟಗಳಲ್ಲಿ ಬಳ್ಳಂಬೆಟ್ಟು ಕುಟುಂಬದಲ್ಲಿ ಉಳಿದವರನ್ನೆಲ್ಲ ಸಾಯಿಸಿ ಬಿಟ್ಟು ನಾಗ್ಡೋ ಬೇತಾಳನನ್ನೂ ತಂದು, ಸಿದ್ದನ ವೆಂಕಟೇಶನೆಂಬ ಮಗುವನ್ನು ಮಾತ್ರ ಉಳಿಸಿ ಕಾದಂಬರಿಗೆ ಅವಸರದಲ್ಲಿ ಅಂತ್ಯ ಕಾಣಿಸಿದಂತೆ ತೋರುತ್ತದೆ.
ಗೋವೆಯಿಂದ ಪೋರ್ಚುಗೀಸರ ಹಿಂಸೆಯನ್ನು ತಡೆಯಲಾರದೆ ವಲಸೆ ಬಂದ ಸಾರಸ್ವತರ ಬಗ್ಗೆ ಹಾಗೂ ಕ್ರಿಶ್ಚನರ ಬಗ್ಗೆ ಅಲ್ಲಲ್ಲಿ ಅಲ್ಪ ಸ್ವಲ್ಪ ಓದಿ ಗೊತ್ತಿತ್ತು. ಬಲಾತ್ಕಾರದಿಂದ ಮತಾಂತರಗೊಂಡು ಕ್ರಿಶ್ಚನರಾದವರೂ ತಮ್ಮ ಹಿಂದಿನ ಸಂಪ್ರದಾಯಗಳನ್ನು ಬಿಡಲಾರದೆ ಪುನಃ ಹಿಂಸೆ ಅನುಭವಿಸಬೇಕಾದ್ದರಿಂದ ಅವರು ಕೂಡ ವಲಸೆ ಹೊರಟ ಬಗ್ಗೆ ಕಾದಂಬರಿಯಲ್ಲಿ ಪ್ರಸ್ತಾಪ ಇದೆ. ಇದನ್ನೋದುವಾಗ ನಾ.ಡಿಸೋಜಾರ ಯಾವುದೋ ಕತೆಯಲ್ಲಿ ಒಬ್ಬ ಕ್ರಿಶ್ಚನ್ ಯಕ್ಷಗಾನ ಬಯಲಾಟ ನೋಡಲು ಹೋದುದಕ್ಕೆ ಪೋರ್ಚುಗೀಸ್ ಪಾದ್ರಿ ಛಡಿಯೇಟು ಕೊಡುವುದು, ಅವನ ಚಲನವಲನಗಳ ಬಗ್ಗೆ ಗಮನವಿರಿಸುವುದು ಇತ್ಯಾದಿ ಓದಿದ ನೆನಪಾಗುತ್ತದೆ.
ಇದು ಸಾಮಾನ್ಯ ಓದುಗನಾಗಿ ನನಗನಿಸಿದ ಮಾತುಗಳಷ್ಟೇ ಹೊರತು ವಿಮರ್ಶೆಯ ಮಾತುಗಳಲ್ಲ. ನಾನು ವಿಮರ್ಶಕನೂ ಅಲ್ಲ, ವಿಮರ್ಶೆಯ ಭಾಷೆಯೂ ಗೊತ್ತಿಲ್ಲ. ಓದಿದ ಬಳಿಕ ಮನಸ್ಸಿನಲ್ಲಿ ಉಳಿದ ಒಂದೆರಡು ಸಂದೇಹಗಳನ್ನು ಅಥವಾ ಪ್ರಶ್ನೆಗಳನ್ನು ತಿಳಿಸಿ ಬಿಡುತ್ತೇನೆ.
೧. ಪೈ ಅವರ ಸಮಾಜ(ಕೊಂಕಣಿಗರು)ದವರನ್ನು ಗೌಡ ಸಾರಸ್ವತರೆನ್ನುತ್ತಾರಷ್ಟೆ? ಇದು ಸಾರಸ್ವತರ ಒಂದು ಪಂಗಡ. ಈ ಹೆಸರಿನಲ್ಲಿರುವ ’ಗೌಡ’ ಹೇಗೆ ಬಂತು? ಗೌಡ ಸಾರಸ್ವತ ಎಂಬ ಪದವನ್ನು ಕಾದಂಬರಿಯಲ್ಲಿ ಬಳಸಿಯೇ ಇಲ್ಲ.
೨. "ಸ್ವಪ್ನ ಸಾರಸ್ವತ" ಎಂಬ ಶೀರ್ಷಿಕೆಯ ಅರ್ಥ, ಮಹತ್ವ ಗೊತ್ತಾಗಲಿಲ್ಲ. ಇಲ್ಲಿ ಸ್ವಪ್ನ ಯಾಕೆ ಬಂತು?
೩. ನಾಗ್ಡೋ ಬೇತಾಳ ಮತ್ತು ಧಡ್ಡ ಲೇಖಕನ ಕಲ್ಪನೆಯ ಕೂಸುಗಳೋ ಅಥವಾ ಸಾರಸ್ವತ ಸಮಾಜದ ಪಾರಂಪರಿಕ ನಂಬಿಕೆಗಳೋ? (ನಂಬಿಕೆಗಳಾಗಿರಬಹುದೆಂದು ನಂಬುತ್ತೇನೆ). ಧಾರ್ಮಿಕ ಕಾರ್ಯಗಳಲ್ಲಿ ಧಡ್ಡನಿಗೆ (ಧಡ್ಡ ದಡ್ಡನಲ್ಲವೇ?) ಒಂದು ಮಣೆ ನೀಡುತ್ತಾರೆ ಎಂದಿದೆ. ಈ ಸಂಪ್ರದಾಯ ಈಗಲೂ ಇದೆಯೇ?
೪. "ಬಳ್ಳಂಬೀಡು" (ಬಳ್ಳಂಬೆಟ್ಟು ಅಲ್ಲ) ಮತ್ತು ಬಲ್ಲಾಳ ಅರಸು ಕಲ್ಪನೆಯಲ್ಲವೇ? ಅಲ್ಲಲ್ಲಿ ಸ್ಥಳೀಯ ಅರಸುಗಳ ಪ್ರಸ್ತಾಪ (ಉದಾಹರಣೆಗೆ ಬೇಳದ ಅರಸು, ಪಟ್ಟಾಜೆ ಅರಸು ಇತ್ಯಾದಿ)ವಿದೆ. ಇದು ಐತಿಹಾಸಿಕ ಸತ್ಯವೇ, ಗೊತ್ತಿಲ್ಲ.
೫. ನನಗೆ ಮೊದಲೇ ಇದ್ದ ಸಂಶಯಗಳಾದ ಯಾಕೆ ಕೊಂಕಣಿಗರು ಹಿರಿಯರನ್ನು ಮಾಮ್ ಮತ್ತು ಮಾಯಿ ಎಂದು ಸಂಭೋದಿಸುತ್ತಾರೆ, ಪ್ರತ್ಯೇಕ ದೇವಸ್ಥಾನಗಳನ್ನು ಕಟ್ಟಿಸುತ್ತಾರೆ, ಇತ್ಯಾದಿಗಳಿಗೆ ಉತ್ತರ ಸಿಕ್ಕಿತು. "ನಿಮ್ಮ ಜನ, ನಿಮ್ಮ ಭಾಷೆ" ಎಂದಿಗೂ ಬಿಡಬೇಡಿ ಎಂಬುದು ನಾಗ್ಡೋ ಬೇತಾಳನ ಆದೇಶವೆಂಬ ಮಾತು ಹಲವು ಸಲ ಬಂದಿದೆ.
೬. ಹಲವು ದಶಕಗಳ ಕಾಲ ದಕ್ಷಿಣ ಕನ್ನಡದಿಂದ ಹೊರಗೆಯೇ ಇದ್ದ ಪೈ ಅವರ ಬರವಣಿಗೆಯ ಭಾಷೆಯ ಮೇಲೆ ಇದರ ಪ್ರಭಾವವನ್ನು ಸ್ಪಷ್ಟವಾಗಿ ಕಾಣಬಹುದು. ಕೆಲವು ಕಡೆ ದಕ್ಷಿಣ ಕನ್ನಡದಲ್ಲಿ ಬಳಕೆಯಲ್ಲಿರುವ ಪದಗಳೂ, ಇನ್ನು ಕೆಲವು ಕಡೆ ಬೇರೆ (ಇತರ ಕಡೆ ಬಳಕೆಯಲ್ಲಿರುವ) ಪದಗಳೂ ಕಾಣುತ್ತವೆ.