Friday, July 29, 2016

ಕಲೆ, ಸಾಹಿತ್ಯ, ಕ್ರೀಡೆ ಇತ್ಯಾದಿ ಕ್ಷೇತ್ರಗಳಲ್ಲಿ ಮೀಸಲಾತಿ ಬೇಡವೇ?


ಹಿಂದುಳಿದ ವರ್ಗ ಮತ್ತು ಪಂಗಡಗಳಿಗೆ ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿ ಮೀಸಲಾತಿಯು ಎಲ್ಲ ರಾಜಕೀಯ ಪಕ್ಷಗಳಿಂದ ಸ್ವೀಕೃತವಾದ ಒಂದು ರಾಷ್ಟ್ರೀಯ ನೀತಿಯಾಗಿದೆ. ಜಾತ್ಯಾಧಾರಿತ ಈ ನೀತಿಯಲ್ಲಿ ಮೀಸಲಾತಿಯ ಪ್ರಮಾಣ ಮತ್ತು ವ್ಯಾಪ್ತಿಗಳನ್ನು ಹೆಚ್ಚಿಸಬೇಕೆಂಬ ಹಾಗೂ ಒಳ ಪಂಗಡಗಳಿಗೆ ಒಳ ಮೀಸಲಾತಿ ಬೇಕೆಂಬ ಬೇಡಿಕೆ ದಿನೇ ದಿನೇ ತೀವ್ರವಾಗುತ್ತಿದೆ. ಇದಕ್ಕೆ ರಾಜಕೀಯ ಬೆಂಬಲವೂ ಸಾಕಷ್ಟಿದೆ. ಖಾಸಗಿ ಕ್ಷೇತ್ರಗಳಿಗೂ ಮೀಸಲಾತಿಯನ್ನು ಅನ್ವಯಿಸಲಾಗುವುದೆಂಬ ಹೇಳಿಕೆಗಳು ಅಧಿಕಾರಸ್ಥರಿಂದ ಬರುತ್ತಿವೆ. ಎಲ್ಲ ರೀತಿಯ ಉನ್ನತ ಶಿಕ್ಷಣದಲ್ಲಿಯೂ ಮೀಸಲಾತಿ ಅಗತ್ಯವೆಂಬ ಸತ್ಯ ಸರಕಾರಕ್ಕೆ ಈಗ ತಾನೇ ಅರಿವಾಗತೊಡಗಿದೆಯೆಂಬುದು ನಿಜವಾಗಿಯೂ ಸಂತೋಷದಾಯಕ ಸಂಗತಿ

ಹಿಂದುಳಿದ ಜನಜಾತಿಗಳ ಬಗ್ಗೆ ಇಷ್ಟೊಂದು ಅನುಕಂಪ, ಸಹಾನುಭೂತಿಗಳನ್ನು ಹೊಂದಿರುವ, ಅವರ ಏಳಿಗೆಗಾಗಿ ಅವಿಶ್ರಾಂತ ಶ್ರಮಿಸುತ್ತಿರುವ, ಸಾಮಾಜಿಕ ಸಮಾನತೆಯ ಸ್ಥಾಪನೆಗೆ ನಿರಂತರ ದುಡಿಯುತ್ತಿರುವ ನಮ್ಮ ರಾಜಕೀಯ ಮುಖಂಡರುಗಳಿಗೆ ಇತರ ಅನೇಕ ಕ್ಷೇತ್ರಗಳಲ್ಲಿಯೂ ರಿಸರ್ವೇಶನ್ ಅಥವಾ ಮೀಸಲಾತಿಯ ಆವಶ್ಯಕತೆಯ ಬಗ್ಗೆ ಜ್ಞಾನೋದಯವಾಗದಿರುವುದು ಅತ್ಯಂತ ಅಚ್ಚರಿಯ ವಿಷಯ. ಯಾವುದೇ ಕ್ಷೇತ್ರದಲ್ಲಾದರೂ, ಹಿಂದುಳಿದವರನ್ನು ಮುಂದಕ್ಕೆ ತರಬೇಕಾದರೆ ಅವರಿಗೆ ಸಮಾನ ಪ್ರಾತಿನಿಧ್ಯ ನೀಡದೆ ಸಾಧ್ಯವಿಲ್ಲ. ಹಿಂದುಳಿದವರು ಮೇಲ್ಜಾತಿಯವರೊಂದಿಗೆ ಹಾಗೂ ಮುಂದುವರಿದವರೊಂದಿಗೆ ಪೈಪೋಟಿಯಲ್ಲಿ ಜಯ ಗಳಿಸಲು ಸಾಧ್ಯವಿಲ್ಲ. ಆದುದರಿಂದ ಮೀಸಲಾತಿಯಿಲ್ಲದೆ, ಯಾವುದೇ ಕ್ಷೇತ್ರದಲ್ಲಿ ಹಿಂದುಳಿದವರನ್ನು ಮುಂದುವರಿದವರೊಂದಿಗೆ ಸಮಾನರೆಂದು ಪರಿಗಣಿಸುವುದು ಸರ್ವಥಾ ಸರಿಯಲ್ಲ.

 ಲಲಿತ ಕಲೆಗಳಲ್ಲಿ, ಸಾಹಿತ್ಯ ಕ್ಷೇತ್ರದಲ್ಲಿ, ರಾಜ್ಯ ಹಾಗೂ ರಾಷ್ಟ್ರ ಮಟ್ಟಗಳಲ್ಲಿ ಪ್ರಶಸ್ತಿ ಗಳಿಕೆಯಲ್ಲಿ ಹಿಂದುಳಿದವರನ್ನು ಕಡೆಗಣಿಸಿಲ್ಲವೇ? ಈ ಬಗ್ಗೆ ಸರಕಾರಗಳು ಶ್ವೇತಪತ್ರ ಪ್ರಕಟಿಸಿ, ಅಂಕೆಸಂಖ್ಯೆಗಳೊಂದಿಗೆ ವಸ್ತುಸ್ಥಿತಿಯ ಮೇಲೆ ಬೆಳಕು ಚೆಲ್ಲಬೇಕು. ರಾಜ್ಯೋತ್ಸವ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಭಾರತರತ್ನ, ತಾನಸೇನ ಪ್ರಶಸ್ತಿ, ಕಾಳಿದಾಸ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ಪಂಪ ಪ್ರಶಸ್ತಿ,  ಅರ್ಜುನ, ದ್ರೋಣಾಚಾರ್ಯ, ಏಕಲವ್ಯದಂತಹ ಪ್ರಶಸ್ತಿ, - ಇತ್ಯಾದಿಗಳ ವಿತರಣೆಯಲ್ಲಿ ಸಾಮಾಜಿಕ ನ್ಯಾಯ ಒದಗಿಸಬೇಕಿದ್ದರೆ ಮೀಸಲಾತಿ ಅತ್ಯಗತ್ಯ.

                             ***************************
 (ಇದನ್ನು  ಮೇ 10, 2006 ರಲ್ಲಿ ಬರೆದುದು.)

No comments:

Post a Comment