Thursday, July 28, 2016

ಕ್ಯಾಪ್ಟನ್ ಗೋಪಿನಾಥ್ ಆತ್ಮಕತೆ - ಬಡತನದಿಂದ ಸಿರಿತನದ ಕಡೆಗೆ - ಸಾಹಸ ರಮ್ಯ ರಸಭರಿತ ಜೀವನಗಾಥೆ

ಪುಸ್ತಕ ಪರಿಚಯ:
 SIMPLY FLY - A DECCAN ODYSSEY
                        By
CAPTAIN G. R. GOPINATH
First published in India in 2009 by HarperCollins.
Pages: 380; Price: Rs. 499
Foreword by A. P. J. Abdul Kalam



ಕಡಿಮೆ ವೆಚ್ಚದ ವಿಮಾನಯಾನದ ಕನಸನ್ನು ನೆನಸಾಗಿಸಿದ ಸಾಹಸಿ ಗೊರೂರು ರಾಮಸ್ವಾಮಿ ಗೋಪಿನಾಥ್ ಜನಿಸಿದ್ದು ಹಾಸನ ಜಿಲ್ಲೆಯ ಗೊರೂರು ಎಂಬ ಹಳ್ಳಿಯ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಶಾಲಾಶಿಕ್ಷಕನ ಎಂಟು ಮಕ್ಕಳಲ್ಲಿ ಎರಡನೆಯವನಾಗಿ 1951ರಲ್ಲಿ. ಇಂತಹ ಹಳ್ಳಿ ಶಾಲೆಯ ಕನ್ನಡದ ಹುಡುಗ ತಾನೇರಿದ ಎತ್ತರಕ್ಕೆ ಹೇಗೆ ಬೆಳೆದ ಎಂಬ ಕತೆ - ಸೋಲು ಗೆಲವುಗಳ, ಜೀವನದ ಏರಿಳಿತಗಳ, ಕಷ್ಟ ಕಾರ್ಪಣ್ಯಗಳ, ಅದ್ಭುತ ಘಟನಾವಳಿಗಳ, ಸಿನಿಮೀಯ ಸಾಹಸಗಳ ಕತೆ  ಗೋಪಿನಾಥರ ಮಾತುಗಳಲ್ಲಿ ಸೊಗಸಾಗಿ ಮೂಡಿ ಬಂದಿದೆ ಈ ಪುಸ್ತಕದಲ್ಲಿ.  ಮುನ್ನುಡಿಯಲ್ಲಿ ಅಬ್ದುಲ್ ಕಲಾಮರು ಹೇಳಿದಂತೆ ಇದು ಎಂ.ಬಿ.ಎ. ವಿದ್ಯಾರ್ಥಿಗಳು ಓದಬೇಕಾದ ಪಠ್ಯವಾಗಬೇಕು. ಇದು ಅದ್ಭುತ ರಮ್ಯ ಕಾದಂಬರಿಗಳಂತೆ ಓದುಗರನ್ನು ಹಿಡಿದಿಡುವ ಗ್ರಂಥ.

      ಒಟ್ಟು ಹತ್ತೊಂಭತ್ತು ಅಧ್ಯಾಯಗಳಲ್ಲಿ ಹೇಮಾವತಿ ನದಿ ದಂಡೆಯ ಗೊರೂರಲ್ಲಿ ಕಳೆದ ಬಾಲ್ಯದಿಂದ ತೊಡಗಿ ಸೇನಾಧಿಕಾರಿ, ಕೃಷಿಕ, ಹೈನೋದ್ಯಮಿ, ಕುಕ್ಕುಟೋದ್ಯಮಿ, ರೇಶ್ಮೆ ಕೃಷಿಕ, ಮೋಟರ್ ಸೈಕಲ್ ಡೀಲರ್, ಉಡುಪಿ ಹೋಟೆಲ್ ಉದ್ಯಮಿ, ಶೇರ್ ಬ್ರೋಕರ್, ನೀರಾವರಿ ಉಪಕರಣಗಳ ಡೀಲರ್, ಕೃಷಿ ಕನ್ಸಲ್ಟೆಂಟ್, ರಾಜಕಾರಣಿ, ಮೊದಲಾದ ಹತ್ತು ಹಲವು ಅವತಾರಗಳನ್ನು ದಾಟಿ ವಾಯುಯಾನದ ಕ್ಷೇತ್ರಕ್ಕೆ ತಲುಪಿದ,- ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಸಾಧನೆಯ, ರೋಚಕ ಕತೆಯನ್ನು ವಿವರಿಸುವ ಗೋಪಿನಾಥರ ಕಥನ ಸಾಮರ್ಥ್ಯವೂ ಓದುಗನನ್ನು ಅಚ್ಚರಿಗೊಳಿಸುತ್ತದೆ. ಸೇನೆಯಿಂದ ಸ್ವಂತ ಇಚ್ಛೆಯಿಂದ ಹೊರಬಂದಾಗ ಸಿಕ್ಕಿದ ಹಣ ಕೇವಲ ಆರು ಸಾವಿರ ರೂಪಾಯಿ. ಇಂತಹ ಅತ್ಯಲ್ಪ ಮೊತ್ತದ ಬಂಡವಾಳದೊಂದಿಗೆ ಆರಂಭಿಸಿದ ಔದ್ಯಮಿಕ ಸಾಹಸ ಗೋಪಿನಾಥರನ್ನು ವಿಮಾನವೇರುವಷ್ಟು ಎತ್ತರಕ್ಕೆ ಏರಿಸಿದ್ದಲ್ಲದೆ, ಸಾಮಾನ್ಯ ಜನರು ಕೂಡ ವಿಮಾನ ಪ್ರಯಾಣ ಮಾಡಬೇಕೆಂಬ ಕನಸನ್ನು ನೆನಸಾಗಿಸಿದ ನಿಜ ಜೀವನದ ಕತೆಯನ್ನು  ಅವರ ಮಾತುಗಳಲ್ಲೇ ಕೇಳಬೇಕೆಂದಿದ್ದರೆ ಈ ಆತ್ಮಕತೆಯನ್ನು ಓದಲೇ ಬೇಕು.

   ಪುಸ್ತಕದ ಉದ್ದಕ್ಕೂ ಅಲ್ಲಲ್ಲಿ ಸ್ವಾರಸ್ಯಕರ ಘಟನೆಗಳು, ಸರಸವಿರಸಗಳು, ಹೋರಾಟದ ಬದುಕಿನ ಮಧ್ಯೆ ಬಂದು ಹೋಗುತ್ತವೆ. ನಮ್ಮ ವಿದ್ಯಾವಂತ ಯುವಕರು ಓದಬೇಕಾದ ಪುಸ್ತಕ. ಗೋಪಿನಾಥರ ಜೀವನದ ಅನುಕರಣೆ ಸಾಧ್ಯವಿಲ್ಲ; ಮಾಡಲೂ ಬಾರದು. ಆದರೆ ಅದರಿಂದ ಕೆಲವರಾದರೂ ಪ್ರೇರಣೆ ಪಡೆಯಬಹುದು.

                                ***************************

No comments:

Post a Comment